ಕನ್ನಡ ಭಾಷೆಯ ಉಳಿವಿನ ಸವಾಲುಗಳು.
Abstract
ಇತರ ಪ್ರದೇಶದವರು ಇಲ್ಲಿ ಬಂದು ತಮ್ಮ ಭಾಷೆಯಲ್ಲಿ ವ್ಯವಹರಿಸುವಾಗ ನಾವು ಅವರಿಗೆ ನಮ್ಮ ಕನ್ನಡದಲ್ಲೆ ಮಾತನಾಡಿದ್ದರೆ, ಅವರಿಗೂ ಕನ್ನಡ ಕಲಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕನ್ನಡಿಗರೇ ಅವರೊಂದಿಗೆ ತಮ್ಮದಲ್ಲದ ಭಾಷೆಯನ್ನು ಕಲಿತು ವ್ಯವಹರಿಸಲು ಪ್ರಾರಂಭಿಸಿದುದರ ಪರಿಣಾಮವಾಗಿ ‘ಕನ್ನಡವನ್ನು ಉಳಿಸಿ, ಬೆಳೆಸಿ, ರಕ್ಷಿಸಿ’ ಎಂಬ ಘೋಷಣೆಗಳು ಅನಿವಾರ್ಯವಾದವು. ಎಂದೋ ಒಮ್ಮೆ ಕನ್ನಡ ನಾಡು ನುಡಿ ಉತ್ಕೃಷ್ಟತೆಯ ಬಗ್ಗೆ ಹಾಡಿ ಹೊಗಳಿದ ಕವಿಗಳ ಕವಿತೆಗಳನ್ನು ಪುನರ್ಮನನ ಮಾಡಿದರೆ, ‘ಮಹಾಲಿಂಗರಂಗ’ ರವರು ತಮ್ಮ ‘ಅನುಭವಾಮೃತ’ ಕೃತಿಯಲ್ಲಿ “ಕನ್ನಡವು ಸುಲಿದ ಬಾಳೆಹಣ್ಣಿನಂತೆ ಮೃದುವು, ಸುಕೋಷ್ಣ ಸ್ಥಿತಿಯಲ್ಲಿರುವ ಹಾಲಿನಂತೆ ಶುಭ್ರವು, ಕಳೆದ ಸಿಗುರಿನ ಕಬ್ಬಿನಂತೆ ಸರಳವು, ಸುಲಭವು ಆದ ಭಾಷೆ ಎಂದಿದ್ದಾರೆ. ಆದರೆ ಇಂತಹ ಸರಳ, ಸುಂದರ, ಸುಲಭವಾದ ಕನ್ನಡ ಭಾಷೆ ಆಧುನೀಕರಣವೆಂಬ ನೆಪದಡಿ ಮೂಲೆಗುಂಪಾಗುತ್ತಿರುವುದು ಆತಂಕಕಾರಿ ವಿಷಯ. ಕನ್ನಡ ಪ್ರಬುದ್ಧತೆಯನ್ನು ಕಣ್ಣಾರೆ ಕಂಡ ಮಹಾನ್ ಕವಿಗಳು, ವಿದ್ವಾಂಸರು ಮುಂದೊಂದು ದಿನ ‘ಕನ್ನಡ ಉಳಿಸಿ’ ಎಂಬ ಉದ್ಗಾರಗಳ ಅನಿವಾರ್ಯತೆ ಎದುರಾಗಬಹುದು ಎಂದು ಊಹಿಸಿಯೂ ಇರಲಿಲ್ಲವೆನ್ನಿಸುತ್ತದೆ. ಇಂತಹ ಪ್ರಬುದ್ಧ ಕನ್ನಡ ಭಾಷೆಯು ಇಂದು ತನ್ನ ಉಳಿವಿನ ಬಗೆಯೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ಎದುರಿಸಲು ನಾವು ಸನ್ನದ್ದರಾಗಿ ಅದನ್ನು ಎದುರಿಸಿ ನಮ್ಮ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕು. ಸಣ್ಣ ಬಿರುಕೊಂದು ಬೃಹತ್ ಜಲಾಶಯ ಒಡೆಯಲು ಕಾರಣವಾಗಬಹುದಾದ್ದರಿಂದ ಕನ್ನಡ ನಿರ್ಲಕ್ಷ್ಯಕ್ಕೆ ಸ್ವಲ್ಪವೂ ಅವಕಾಶ ಕೊಡಬಾರದು. ಗ್ರಾಂಥಿಕ ಭಾಷೆ ಹಾಗೂ ಆಡು ಭಾಷೆಯಾಗಿ ಕನ್ನಡ ನಿರಂತರವಾಗಿ ಮುಂದುವರೆದು ಜೀವಂತ ಭಾಷೆಯಾದಲ್ಲಿ ‘ಅರಳುಗಟ್ಟಿ ವಜ್ರಕ್ಕೆ ಮೆರಗು ಕೊಡುವಂತಾಗುತ್ತದೆಯಲ್ಲವೇ?’.