ಶ್ರೀ ಎಸ್. ಡಿ. ಇಂಚಲರ ‘ಕಾವ್ಯಪ್ರೇಮ’.
Abstract
‘ಬಸವತನಯ’ ಎಂಬ ಕಾವ್ಯನಾಮದಿಂದ ಸಾಹಿತ್ಯವನ್ನು ಸೃಷ್ಠಿಸಿ, ಕನ್ನಡ ತಾಯಿ ಭುವನೇಶ್ವರಿಗೆ ಅರ್ಪಿಸಿದ ನವೋದಯ ಕವಿ ಶ್ರೀ ಎಸ್. ಡಿ. ಇಂಚಲರು. ಯಾವುದೇ ಸ್ವಾರ್ಥವಿಲ್ಲದೇ ಕನ್ನಡ ಸೇವೆಯನ್ನು ತಮ್ಮ ಕೊನೆಯುಸಿರಿರುವರೆಗೂ ಪ್ರಯತ್ನಿಸಿದ ಮಹನೀಯರಲ್ಲಿ ಮಹನೀಯರಾದವರು. ಕನ್ನಡದ ನೋವು-ನಲಿವಿಗೆ ಸ್ಪಂದಿಸಿದ್ದು, ‘ನಾಡಿಗಾಗಿ ನಡಿ, ನಾಡಿಗಾಗಿ ದುಡಿ, ನಾಡಿಗಾಗಿ ಮಡಿ’ ಎಂದು ತಮ್ಮ ಗಟ್ಟಿ ನುಡಿಗಳಿಂದ ಸ್ಪೂರ್ತಿ ತುಂಬುತ್ತಾ ಬೆಳಗಾವಿ ಮತ್ತು ಅದರ ಸುತ್ತಲಿನ ಪರಿಸರದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸುವಲ್ಲಿ ಮಹತ್ತರವಾದ ಸೇವೆ ಸಲ್ಲಿಸಿದ ಕೀರ್ತಿ ಎಸ್. ಡಿ. ಇಂಚಲರಿಗೆ ಸಲ್ಲುತ್ತದೆ. ಪ್ರಕೃತಿಯ ಆರಾಧನೆ, ನಿಸರ್ಗದ ಸೌಂದರ್ಯ, ಪ್ರೀತಿ, ಮಮತೆ, ಗೌರವಗಳನ್ನು ತೋರಿಸುತ್ತಾ ಎಲ್ಲರ ಮನದಲ್ಲಿಯೂ ವಿಶ್ವಾಸವನ್ನು ಗಟ್ಟಿಗೊಳಿಸಿದ ಅಪರೂಪದ ಕವಿ. ಕಾವ್ಯಗಳಲ್ಲಿರುವ ರಸಪೂರ್ಣತೆ, ಸಾಮಾಜಿಕ ಚಿಂತನೆ, ಮಕ್ಕಳ ಕವಿತೆಗಳು, ಕನ್ನಡ ನಾಡು-ನುಡಿಯ ಪ್ರೇಮ, ವ್ಯಕ್ತಿಚಿತ್ರಣಗಳ ಕುರಿತ ಕಾವ್ಯಗಳು, ಸ್ನೇಹದ ಕುರಿತಾದ ಕವಿತೆಗಳು ಈ ಎಲ್ಲ ಅಂಶಗಳನ್ನು ಪರಿಪರಿಯಾಗಿ ನೋಡಿದಾಗ ಎಸ್. ಡಿ. ಇಂಚಲರ ಮನದಾಳದ ಮೂಲಕ ಅವರ ದೇಶಪ್ರೇಮ, ಭಾಷಾಪ್ರೇಮ ಹಾಗೂ ವಿದ್ಯಾರ್ಥಿಗಳ ಮೇಲಿರುವ ಪ್ರೀತಿ, ಸ್ನೇಹಿತರ ಬಳಗ, ಸಾಮಾಜಿಕ ಚಿಂತನೆಗಳು ಹೇಗೆ ಎದ್ದು ಕಾಣುತ್ತವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಆದ್ದರಿಂದ ಎಸ್. ಡಿ. ಇಂಚಲರ ಕಾವ್ಯಗಳಲ್ಲಿ ‘ರಸಜ್ಞ’ವನ್ನು ಕಾಣುವ ಮೂಲಕ ಅವರ ಸಾಹಿತ್ಯದ ಅಭಿರುಚಿಯನ್ನು ಎಲ್ಲರಿಗೂ ಉಣಬಡಿಸುತ್ತಾ, ಈ ಲೇಖನದ ಮುಖ್ಯ ಉದ್ದೇಶ ಎಸ್.ಡಿ. ಇಂಚಲರ ಕಾವ್ಯಪ್ರೇಮ ಹೇಗೆ ಸಾಮಾಜಕ್ಕೂ ಮತ್ತು ಓದುಗರಿಗೂ ರಸದೌತಣವನ್ನು ನೀಡುತ್ತದೆ ಎಂಬುದನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.