ವಚನ ಸಾಹಿತ್ಯದಲ್ಲಿ ವೀರರಸ.
Abstract
ಶೃಂಗಾರ ವಿಶ್ಮೋಹಕ ರಸವಾದರೆ ವೀರ ವಿಶ್ವಪೋಷಕ ರಸ. ಉತ್ಸಾಹ ವೀರರಸದ ಸ್ಥಾಯಿಭಾವ. ಅದು ಬದುಕಿನ ಚಾಲನ ಶಕ್ತಿ. ಅದು ನಮ್ಮನ್ನು ಕಾರ್ಯಶೀಲರನ್ನಾಗಿ ಮಾಡುತ್ತದೆ. ಒಂದು ರೀತಿಯ ಹುರುಪನ್ನು ಉಂಟುಮಾಡುತ್ತದೆ. ಅಸಾಧ್ಯ, ಅಸಂಭವ ಎನಿಸುವ ಕೆಲಸಗಳು ಕೂಡ ಸರಳವೆನಿಸುತ್ತವೆ. ವೀರಶೈವ, ವಚನ ಸಾಹಿತ್ಯವು ಶಿವೇತರಕ್ಷತಿಗಾಗಿ ಉದಯಿಸಿದ್ದು, ಇಲ್ಲಿ ವೀರರಸದ ಸ್ಥಾಯಿಯಾದ ‘ಉತ್ಸಾಹ’ ಪ್ರಮುಖವಾಗಿದೆ. ವಚನ ಸಾಹಿತ್ಯವೆಲ್ಲ ಮುಕ್ತಕ ರೂಪದಲ್ಲಿದೆ. ಮುಕ್ತಕ ಅಂದರೆ ಇತರ ಪದ್ಯಗಳೊಡನೆ ಪೂರ್ವಾಪರ ಸಂಬAಧವಿಲ್ಲದಿದ್ದರೂ, ತನ್ನಷ್ಟಕ್ಕೆ ತಾನೇ ಸ್ವತಂತ್ರವಾಗಿ ಅಸಾಧ್ಯವಾಗಬಲ್ಲದು. ಅಂತೆಯೇ ವಚನ ಸಾಹಿತ್ಯ ಸ್ವಾನುಭೂತಿಯ ಸಾಹಿತ್ಯ. ಅಲ್ಲಿ ಶರಣರ ಹೃದಯದ ಉದ್ಗಾರವಿದೆ. ಇಲ್ಲಿ ವೀರರಸವೆಂದರೆ ರಣರಂಗದಲ್ಲಿ ಹೋರಾಡುವುದಲ್ಲ. ಶರಣರು ತನ್ನ ಮನವೇ ಮೊದಲಾದ ಇಂದ್ರಿಯಗಳನ್ನು ಕಾಮ, ಕ್ರೋಧಾದಿ ಮನೋವಿಕಾರಗಳನ್ನು ತಮ್ಮ ಗುರಿಯನ್ನಾಗಿ ಮಾಡಿಕೊಂಡು ಅವುಗಳೊಡನೆ ಹೋರಾಡುತ್ತಾರೆ. ಅದಕ್ಕಾಗಿ ಅವರಿಗೆ ಯಾವ ರಣಕ್ಷೇತ್ರವೂ ಬೇಕಾಗಿಲ್ಲ. ಉದ್ರೇಕಗೊಳಿಸುವ ರಣವಾದ್ಯಗಳೂ ಬೇಕಿಲ್ಲ. ಎಲ್ಲವೂ ಅವರ ಮನದಲ್ಲಿಯೇ ಇವೆ.