ಕೈವಾರ ಮುನಿಯಮ್ಮನ ಕತೆ; ಒಂದು ಪುನರವಲೋಕನ.
Abstract
ತತ್ತ್ವಪದಕಾರರು, ಕಾಲಜ್ಞಾನಿಗಳು ಹಾಗೂ ಪವಾಡಪುರುಷರಾಗಿ ಪರಿಚಿತರಾಗಿರುವ ಕೈವಾರ ನಾರೇಣಪ್ಪನವರ ಹೆಂಡತಿ ಕೈವಾರ ಮುನಿಯಮ್ಮ ಲೋಕಕ್ಕೆ ಅಪರಿಚಿತಳು. ಕೈವಾರ ನಾರೇಣಪ್ಪನವರ ಜೀವನಚರಿತ್ರೆಯನ್ನು ನಿರೂಪಿಸಿದವರು ಈಕೆಯನ್ನು ಒಬ್ಬ ಗಯ್ಯಾಳಿಯಾಗಿ, ಪತಿಪೀಡಕ ಹೆಂಡತಿಯಾಗಿ ಮಾತ್ರ ಗುರುತಿಸಿದ್ದಾರೆ. ಆದರೆ, ಮುನಿಯಮ್ಮ ತನ್ನ ಗಂಡ ಪ್ರಾಪಂಚಿಕ ಗೊಡವೆಗಳಿಂದ ದೂರವಾಗಿ ಸದಾಕಾಲ ಧ್ಯಾನದಲ್ಲಿ ಕಳೆಯುತ್ತಿದ್ದಾಗ, ಆತನನ್ನು ಎಚ್ಚರಿಸಿ ತನ್ನ ಕುಲ ವೃತ್ತಿಯಾದ ಬಳೆ ವ್ಯಾಪಾರದ ‘ಕಾಯಕ’ಕ್ಕೆ ಹೊರಡಲು ಪ್ರೇರೇಪಿಸುತ್ತಿದ್ದಳು. ಅಲ್ಲದೇ, ತನ್ನ ಗಂಡ ಸಂಸಾರವನ್ನು ತ್ಯಜಿಸಿ ಕಾಡಿಗೆ ಹೋದಾಗ ತನ್ನ 3 ಜನ ಮಕ್ಕಳನ್ನು ಸಾಕಿ-ಸಲಹುವ ಜವಾಬ್ದಾರಿಯನ್ನು ಹೊತ್ತವಳು ಮುನಿಯಮ್ಮನೇ.
ನಾರೇಣಪ್ಪ ಈಕೆಯನ್ನು ತನ್ನ ಮೊದಲ ‘ಗುರು’ ಎಂದೂ ಕರೆದದ್ದುಂಟು. ಆದರೆ, ಲೋಕದ ಕಣ್ಣಿಗೆ ಮುನಿಯಮ್ಮ ಗಯ್ಯಾಳಿಯೇ ಆಗಿ ಉಳಿದಿರುವಳು. ಇದು ಕೇವಲ ಮುನಿಯಮ್ಮನ ಸಮಸ್ಯೆ ಅಲ್ಲ. ಹಲವು ತತ್ತ್ವಪದಕಾರರ, ಹರಿದಾಸರ ಮಡದಿ ಮಕ್ಕಳನ್ನು ಇದೇ ರೀತಿ ಚಿತ್ರಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ ಕಾರ್ಯವೆಂದೇನೂ ಅಲ್ಲ. ಇದಕ್ಕೊಂದು ಬದಲಾದ ಚಾರಿತ್ರಿಕ ಮತ್ತು ಸಾಮಾಜಿಕ ಸ್ಥಿತಿಗಳ ಹಿನ್ನೆಲೆಯಿದೆ. ಈ ಹಿನ್ನೆಲೆಗಳನ್ನು ಅವಲೋಕಿಸುತ್ತಾ ಅವಜ್ಞೆಗೆ, ಅಲಕ್ಷ್ಯಕ್ಕೆ ಒಳಗಾದ ಮುನಿಯಮ್ಮನ ಕಾಯಕ ನಿಷ್ಠೆಯನ್ನು ಹಾಗೂ ಸಂಸಾರ ಪ್ರೀತಿಯನ್ನು ಗುರುತಿಸುವ ಸಣ್ಣ ಪ್ರಯತ್ನವನ್ನು ಪ್ರಸ್ತುತ ಲೇಖನದಲ್ಲಿ ಮಾಡಲಾಗುವುದು. ತತ್ತ್ವಪದ ಸಾಹಿತ್ಯ ಅಥವಾ ದಾಸ ಸಾಹಿತ್ಯದ ಸಂದರ್ಭದಲ್ಲಿ ಸ್ತ್ರೀಯರು ಹೆಚ್ಚು ಕಾಣಿಸಿಕೊಳ್ಳದಿರುವುದರ ಹಿಂದಿನ ಕಾರಣವನ್ನು ಶೋಧಿಸುವ ಪ್ರಯತ್ನವೂ ಈ ಲೇಖನದಲ್ಲಿದೆ.