ಸಿದ್ಧರಾಮನ ವಚನಗಳಲ್ಲಿ ಸಾಮಾಜಿಕ ಜೀವನ ಮೌಲ್ಯಗಳು.
Abstract
12ನೇ ಶತಮಾನದ ವಚನ ಚಳವಳಿಯು ಚಲನಶೀಲವಾದ ಧಾರ್ಮಿಕ ನಡೆಯ ಮೂಲಕ ಸಾಮಾಜಿಕ ಬದುಕಿನ ಚಿಂತನೆಗಳನ್ನು ಕುರಿತ ಅಭಿವ್ಯಕ್ತಿಯಾಗಿದೆ. ಇದು ಕಾಯಕ ತತ್ವದಿಂದ ಹೊರಟು ಸಾಮಾಜಿಕ ಪರಿಸರವನ್ನು ಹಾಯ್ದು ಶಿವತತ್ವದೆಡೆಗೆ ಸಾಗುವ ಮತ್ತು ಆ ಮೂಲಕ ಲೌಕಿಕ ಬದುಕನ್ನು ಅತ್ಯಂತ ವೈಚಾರಿಕ ನೆಲೆಯಲ್ಲಿ ಪ್ರಭಾವಿಸಿದ ಸಂದರ್ಭ. ಸಾಮಾಜಿಕ ಬದುಕಿಗೆ ಜಡತ್ವವಾಗಿ ಪರಿಣಮಿಸಿದ್ದ ಲಿಂಗ, ಜಾತಿ, ವೃತ್ತಿಗಳ ಬಗೆಗಿದ್ದ ಹಲವು ರೀತಿಯ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮುರಿದು ಮಾನವ ಬಂಧುತ್ವವನ್ನು ಪ್ರತಿಪಾದಿಸಿದ ಈ ಚಳವಳಿಯು ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಿಕಗಳಂತಹ ಹಲವು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಂಚಲನವನ್ನು ಮೂಡಿಸಿದೆ. ಸಮಾನತೆ, ಸಹಿಷ್ಣತೆ, ಬಹುತ್ವ, ಬಂಧುತ್ವ, ಮಾನವೀಯತೆ, ಅಹಿಂಸೆ, ಅಭಿವ್ಯಕ್ತಿ ಸ್ವಾತಂತ್ರ್ಯಗಳಂತಹ ಸಾರ್ವಕಾಲಿಕ ಮೌಲ್ಯಗಳನ್ನು ತನ್ನ ನಡೆನುಡಿಗಳಿಂದ ಬಿತ್ತಿ ಬೆಳೆದು ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಗೆ ಚಲನಶೀಲವಾದ ಪರಂಪರೆಯನ್ನು ಒದಗಿಸಿಕೊಟ್ಟಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮರಂತಹ ಪ್ರಮುಖರಾದಿಯಾಗಿ ವೈವಿಧ್ಯಮಯ ಕಾಯಕ ವೃತ್ತಿಯ ಹಿನ್ನೆಲೆಯಿಂದ ಬಂದ ಶರಣರೂ, ವಚನಕಾರರೂ ಶಿವತತ್ವದಡಿಯಲ್ಲಿ ಸಂಘಟಿತರಾಗಿ ಅಭಿವ್ಯಕ್ತಿಸಿದ ವಿವಿಧ ಆಶಯಗಳನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ.