ಡಾ. ಚಂದ್ರಶೇಖರ ಕಂಬಾರರ ‘ಸಿರಿಸಂಪಿಗೆ’ ನಾಟಕದಲ್ಲಿ ಸ್ತ್ರೀ ಸಂವೇದನೆ.
Abstract
ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ಜಾನಪದ ಸತ್ತ್ವವನ್ನು ಹೀರಿಕೊಂಡು ದೇಶೀಯತೆಯನ್ನು ಜಾಗೃತಗೊಳಿಸಿ ಜ್ಞಾನಪೀಠದ ಎತ್ತರಕ್ಕೆ ಏರಿದ ಡಾ. ಚಂದ್ರಶೇಖರ ಕಂಬಾರರ ಸಾಹಿತ್ಯವು ಕನ್ನಡದ ಕೀರ್ತಿಯನ್ನು ಸಮೃದ್ಧಿಗೊಳಿಸಿದೆ. ಕಂಬಾರರು ಕವಿಗಳಾಗಿ, ಕಾದಂಬರಿಕಾರರಾಗಿ, ಸಂಶೋಧಕರಾಗಿ, ಜಾನಪದ ವಿದ್ವಾಂಸರಾಗಿ, ನಾಟಕಕಾರರಾಗಿ ಇನ್ನೂ ಮುಂತಾದ ವ್ಯಕ್ತಿತ್ವಗಳನ್ನು ಹೊಂದುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಇವರ ನಾಟಕ ಸಾಹಿತ್ಯವು ದೇಶೀಯ ಜಾನಪದ ಬೇರಿನಿಂದ ಹುಟ್ಟಿ ವಾಸ್ತವ ಸಾಮಾಜಿಕ ಪ್ರಜ್ಞೆಯ ಮೂಲಕ ಕವಲೊಡೆಯುತ್ತವೆ. ಇಂತಹ ನಾಟಕಗಳಲ್ಲಿ ‘ಸಿರಿಸಂಪಿಗೆ’ ನಾಟಕವು ಒಂದಾಗಿದೆ. ಕಂಬಾರರು ಈ ನಾಟಕದ ಮೂಲಕ ಪುರುಷನ ಅನೈಸರ್ಗಿಕ ಮನೋಭಾವನೆ ಹಾಗೂ ಪುರುಷನ ದ್ವಂದ್ವಾತ್ಮಕ ನಿಲುವುಗಳನ್ನು ತೆರೆದಿಡುವ ಮೂಲಕ ಸ್ತ್ರೀ ಜಗತ್ತನ್ನು ಚಿತ್ರಿಸುತ್ತಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಅನುಭವಿಸುವ ದುಃಖ-ದುಮ್ಮಾನಗಳನ್ನು ವಿವರಿಸುವ ಮೂಲಕ ಪುರುಷನ ಕೇಡು ಹಾಗೂ ಈ ಕೇಡುಗಳಿಂದ ಮಹಿಳೆ ಜಾಗೃತಳಾಗಿ ಬದುಕಿನ ಪರಿಹಾರವನ್ನು ಕಂಡುಕೊಳ್ಳುವ ಬಗೆಯನ್ನು ಈ ನಾಟಕದಲ್ಲಿ ಚಿತ್ರಿಸಿದ್ದಾರೆ.