ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ದೇಶಿಯತೆಯ ಶೋಧನೆ.
Abstract
ಕಡಲತಡಿಯ ಭಾರ್ಗವರೆಂದು ಪ್ರಖ್ಯಾತರಾಗಿರುವ ಡಾ. ಶಿವರಾಮ ಕಾರಂತರು ವಾಸ್ತವತವಾದದ ದೃಷ್ಟಿಕೋನದಿಂದ ಸಮಾಜವನ್ನು ಬದುಕನ್ನು ನೋಡಿ ತಾವು ಸಾರ್ವಕಾಲಿಕವೆಂದು ನಂಬುವ ಸಹಾನೂಭೂತಿ ಸ್ನೇಹ, ಜೀವನ ಶ್ರದ್ಧೆ, ಔದಾರ್ಯ, ಕಷ್ಟ ಸಹಿಷ್ಣುತೆ ಮೊದಲಾದ ಜೀವನ ಮೌಲ್ಯಗಳನ್ನು ನಿಕಷಕೊಡ್ಡುವ ಕಾರ್ಯವನ್ನು ತಮ್ಮ ಕಾದಂಬರಿಗಳಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ಇಹದ ಬದುಕಿಗೆ ಕಾರಂತರಷ್ಟು ಮಹತ್ವ ನೀಡಿದ ಲೇಖಕರಿಲ್ಲ ಎನ್ನಬಹುದು. ಜೀವನ ಮೌಲ್ಯಗಳನ್ನು ಶೋಧಿಸಲು ಕಾದಂಬರಿ ಪ್ರಕಾರವನ್ನು ಒಂದು ಅರ್ಥಪೂರ್ಣವಾದ ಮಾಧ್ಯಮವನ್ನಾಗಿ ಕಾರಂತರು ಬಳಸಿಕೊಂಡಿದ್ದಾರೆ. ಬದುಕಿನ ಮೂಲಭೂತ ಸತ್ಯಾನ್ವೇಷಣೆಯಲ್ಲಿ ಇವರ ಕಾದಂಬರಿಗಳು ತೊಡಗುತ್ತವೆ.
ವಸಾಹತುಶಾಹಿಯ ಮೂಲಕ ಭಾರತೀಯ ಸಮಾಜವನ್ನು ಪ್ರವೇಶಿಸಿದ ಆಧುನಿಕತೆಯು ಸಾಂಪ್ರದಾಯಿಕ ಸಮಾಜದ ಸಂಬಂಧಗಳಲ್ಲಿ ಉಂಟುಮಾಡಿದ ತಲ್ಲಣ ಮತ್ತು ಪಲ್ಲಟಗಳನ್ನು ಕಾರಂತರು ಹಲವು ಕಾದಂಬರಿಗಳಲ್ಲಿ ಸೂಚಿಸಿಸುತ್ತಾರೆ. ಸಾಂಪ್ರದಾಯಿಕತೆ ಮತ್ತು ಆಧುನಿಕತೆಗಳೆರಲ್ಲೂ ಇರುವ ಕೇಡು, ಹಿಂಸೆ, ಅಮಾನವೀಯತೆಗಳನ್ನು ಕಾರಂತರು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಅಂದರೆ ಪರಂಪರೆ ಮತ್ತು ಆಧುನಿಕತೆಗಳಲ್ಲಿರುವ ಒಳಿತಿನಿಂದ ವ್ಯಕ್ತಿ ವಿಕಾಸಕೊಳ್ಳಬೇಕೆಂಬುದು ಕಾರಂತರ ಪ್ರಮುಖ ಆಶಯವಾಗಿದೆ. ಹೀಗಾಗಿಯೇ ಇವರ ಕಾದಂಬರಿಗಳಲ್ಲಿ ಬರುವ ವಯಸ್ಸಾದ ಪಾತ್ರಗಳು ಸಾಂಪ್ರದಾಯಿಕ ಬದುಕನ್ನು ಕಿರಿಯ ಪಾತ್ರಗಳು ಆಧುನಿಕ ಬದುಕನ್ನು ಪ್ರತಿನಿಧಿಸುವುದನ್ನು ಕಾಣುತ್ತೇವೆ.
ಕಾರಂತರು ತಮ್ಮ “ಬಾಳ್ವೆಯೇ ಬೆಳಕು” ಕೃತಿಯಲ್ಲಿ ನಿಸರ್ಗವು ಮನುಷ್ಯನಿಗೆ ನೀಡುವ ಜ್ಞಾನದ ಬಗ್ಗೆ ಹೀಗೆ ಹೇಳಿದ್ದಾರೆ “ಕಣ್ಣಿಗೆ ಕಾಣಿಸದಂಥ ಬರೆಹ, ಕಿವಿಗೆ ಕೇಳಿಸದಂಥ ಮಾತು ನಿಸರ್ಗದ ನೋಟದಲ್ಲಿ ಅಡಕವಾಗಿದೆ. ವ್ಯಕ್ತಿಗೆ ನಿಸರ್ಗ ತಿಳಿಸುವಷ್ಟು ಸತ್ಯ-ಸೊಗಸು ಇನ್ನಾವುದರಿಂದಲೂ ದೊರೆಯಲಾರವು. ಅದುಕೊಡುವ ಪ್ರೇರಣೆ ಹೊಸ ಗಾಳಿಯಷ್ಟು ಹಸನು” ಎಂದಿದ್ದಾರೆ. ನಿಸರ್ಗವು ಮಾನವನ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದು ಕಾರಂತರು ಸ್ಪಷ್ಟಪಡಿಸುತ್ತಾರೆ. ಯಾವ ಮನುಷ್ಯ ಪ್ರಕೃತಿಯೊಂದಿಗೆ ಬೆರೆಯುತ್ತಾ, ಸ್ಪರ್ಧಿಸುತ್ತಾ, ಹೋಗುತ್ತಾನೋ ಅವನು ವಿಕಾಸಗೊಳ್ಳುತ್ತಾನೆ ಎಂಬುದು ಕಾರಂತರ ನಿಲುವಾಗಿದೆ. ಇದನ್ನು ಮರಳಿ ಮಣ್ಣಿಗೆ ಕಾದಂಬರಿಯಲ್ಲೂ ಗುರುತಿಸಬಹುದಾಗಿದೆ.